ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಸಭೆಗೆ ರಾಹುಲ್ ಗಾಂಧಿ ಅವರು ಆಹ್ವಾನಿಸಿದರು. ಆದರೆ, ನಾನೇ ಬೇಡ ಎಂದೆ. ಎಲೆಕ್ಷನ್ ಹೋಗುವ ವಯಸ್ಸು ಅಲ್ಲ ರಾಜ್ಯಸಭೆ ಸದಸ್ಯರಾಗುವುದೂ ಇಲ್ಲ. ದೆಹಲಿ ಬರೋದೂ ಇಲ್ಲ ಎಂದೆ. ರಾಜ್ಯಸಭೆ ಸದಸ್ಯತ್ವ ಬೇಡ ಎಂದ ನಂತರ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರನ್ನಾಗಿ ಮಾಡಿದರು ಎಂದು ಸಿದ್ದರಾಮಯ್ಯ ಹೇಳಿದರು.
ಲೋಕನಾಯಕ ಜೆ.ಪಿ.ವಿಚಾರ ವೇದಿಕೆ ಭಾನುವಾರ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಜಯಪ್ರಕಾಶ ನಾರಾಯಣ್ ಜನ್ಮದಿನ ಕಾರ್ಯಕ್ರಮದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರಿಗೆ ಈ ಸಾಲಿನ ‘ಜೆ.ಪಿ.ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು. ಈ ವೇಳೆ ವೇದಿಕೆಯಲ್ಲಿದ್ದ ಕೆಲವರು ರಾಜ್ಯಸಭೆಗೆ ಹೋಗಿ ಎಂದು ಕೂಗಿದರು. ಆಗ ಒಮ್ಮೆ ಮಾತು ನಿಲ್ಲಿಸಿದ ಸಿದ್ದರಾಮಯ್ಯ, ಸಭಿಕರತ್ತ ನೋಡಿ, ‘ನೋಡೋಣ, ಸ್ನೇಹಿತರಲ್ಲಿ ಮಾತನಾಡಿ ಮುಂದುವರಿಯುತ್ತೇನೆ’ ಎಂದು ಭಾಷಣ ಮುಂದುವರಿಸಿದರು.
ಲೋಕಸಭೆ ಎಲೆಕ್ಷನ್‌ಗೆ ನಿಂತಿದ್ದಾಗ ಜಾರ್ಜ್ ಫರ್ನಾಂಡೀಸ್ ಅವರು ನನಗೆ 10000 ಕೊಟ್ಟಿದ್ದರು. ಜನರು 53000 ರೂ. ಕೊಟ್ಟಿದ್ರು. ಈಗ ಎಲೆಕ್ಷನ್ ಕಲುಷಿತವಾಗಿ ಹೋಗಿದೆ. ಪ್ರಮಾಣಿಕರು ಯಾರೂ ಗೆಲ್ಲುವುದು ಕಷ್ಟ. ಹಾಗಾಗಿಯೇ ಬಿ.ಎಲ್.ಶಂಕರ್ ಅವರು ಎಲೆಕ್ಷನ್ ನಿಲ್ಲೋಲ್ಲ ಅಂತಾರೆ. ಸಾಲಗಾರನಾಗುತ್ತೇನೆ ಎಂದರು. ಇದರ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ದೆಹಲಿಯಲ್ಲಿ ಸೋಮವಾರ ‘ಇಂಡಿಯಾ’ ಮೈತ್ರಿಕೂಟ ಹಮ್ಮಿಕೊಂಡ ಹೋರಾಟದಲ್ಲಿ ಭಾಗವಹಿಸುವ ಬಗ್ಗೆ ನನಗೆ ಯಾರಿಂದಲೂ ಫೋನ್ ಬಂದಿಲ್ಲ. ಮಾಹಿತಿ ಬಂದಿದೆ. ನೋಡೋಣ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗಾಂಧಿ ಭವನದಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೋರಾಟ ಹಮ್ಮಿಕೊಂಡ ಬಗ್ಗೆ ಮಾಹಿತಿ ಬಂದಿದೆ. ಯಾವುದೇ ಫೋನ್ ಬಂದಿಲ್ಲ. ದೆಹಲಿಗೆ ಹೋಗಲು ಟಿಕೆಟ್ ಸಿಗುತ್ತಾ ನೋಡುತ್ತೇನೆ. ಸಿಕ್ಕರೆ ಹೋಗುತ್ತೇನೆ. ಯಾವುದಕ್ಕೂ ಸೋಮವಾರ ಕಾರ್ಯಕ್ರಮ ಇದೆ. ನೋಡೋಣ ಎಂದು ಹೇಳಿದರು.













