ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ವಿಡಿಯೋ ಪ್ರಕರಣ ಹೊಸ ತಿರುವು ಪಡೆದು ಕೊಂಡಿದೆ. ಪ್ರಕರಣದಲ್ಲಿ ದೆಹಲಿ ಮೂಲದ ಯುವಕನ ಕೈವಾಡ ಇರುವುದು ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಮತ್ತೊಂದೆಡೆ ಪ್ರಕರಣದ ಸಂತ್ರಸ್ತೆಯ ಹೇಳಿಕೆಯನ್ನು ಸಿಸಿಬಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ದೆಹಲಿ ಮೂಲದ ರಿತೇಶ್ ಪಾಂಡೆ (23) ಬಂಧಿತ. ಆರೋಪಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋವನ್ನು ಕರ್ನಾಟಕ ಹನಿಟ್ರ್ಯಾಪ್ ಎಂಬ ಯುಟ್ಯೂಬ್ ಚಾನಲ್ ತೆರೆದು ಅಪ್ಲೋಡ್ ಮಾಡಿದ್ದ ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ, ಪ್ರಾಥಮಿಕ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗೆ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದು, ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ದೆಹಲಿಯ ಗಾಜಿಯಾಬಾದ್ ಮೂಲದ ರಿತೇಶ್ ಪಾಂಡೆ, ಸಾಮಾಜಿಕ ಜಾಲತಾಣದಲ್ಲಿ ಕೆಲ ಖಾತೆಗಳ ನಿರ್ವಹಣೆ ಮಾಡುವ ಕೆಲಸ ಮಾಡುತ್ತಿದ್ದಾನೆ. ಇದರಲ್ಲಿ ಕೆಲ ಸಣ್ಣ-ಪುಟ್ಟ ರಾಜಕೀಯ ಮುಖಂಡರು, ಸ್ಥಳೀಯ ಸಂಘಟನೆಗಳ ಖಾತೆಗಳು ಇವೆ ಎಂದು ಹೇಳಲಾಗಿದೆ. ಈ ಮಧ್ಯೆ 4 ತಿಂಗಳ ಹಿಂದೆ ಈತನ ಬಗ್ಗೆ ತಿಳಿದ ಅಪರಿಚಿತ ವ್ಯಕ್ತಿಯೊಬ್ಬರು ರಿತೇಶ್ ಪಾಂಡೆಯನ್ನು ಸಂಪರ್ಕಿಸಿ, ವಿಡಿಯೋವೊಂದನ್ನು ಅಪ್ಲೋಡ್ ಮಾಡುವ ಕುರಿತು ವ್ಯವಹಾರ ನಡೆಸಿದ್ದಾರೆ. ಹಣದ ಆಮಿಷಕ್ಕೆ ಒಳಗಾದ ರಿತೇಶ್ ಪಾಂಡೆ ಒಪ್ಪಿಕೊಂಡಿದ್ದಾನೆ. ಆದರೆ, ವಿಡಿಯೋ ಇದ್ದ ಪೆನ್‌ಡ್ರೈವ್ ಕೊಟ್ಟ ವ್ಯಕ್ತಿ ಯಾರು ಎಂಬ ಬಗ್ಗೆ ತನಗೆ ತಿಳಿದಿಲ್ಲ. 1 ಲಕ್ಷ ರೂ.ಗೆ ಬೇಡಿಕೆ ಇಟ್ಟರೂ ಕೊನೆಗೆ ನಗದು ರೂಪದಲ್ಲಿ 80,000 ರೂ .ಗೂ ಅಧಿಕ ಹಣ ನೀಡಿದರು. ಹೀಗಾಗಿ ವಿಡಿಯೋ ಅಪ್ಲೋಡ್ ಮಾಡಿದ್ದೇನೆ ಎಂದು ಆರೋಪಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಹಣದ ಆಮಿಷಕ್ಕೊಳಗಾಗಿ ವಿಡಿಯೋ ಅಪ್ಲೋಡ್ ಮಾಡಲು ಒಪ್ಪಿಕೊಂಡ ರಿತೇಶ್ ಪಾಂಡೆ, ದೆಹಲಿಯ ಕರೋಲ್ ಬಾಗ್ ಮಾರ್ಕೆಟ್‌ನಲ್ಲಿ ಸಿಮ್ ಕಾರ್ಡ್ ವರ್ಕ್ (ನೆಟ್ವರ್ಕ್, ಲೊಕೇಶನ್ ಮರೆಮಾಚಲು) ಆಗದಿರುವಂತಹ 15 ಸಾವಿರ ರೂ. ಮೌಲ್ಯದ 2 ಸೆಕೆಂಡ್ ಹ್ಯಾಂಡ್ ಮೊಬೈಲ್‌ಗಳ ಖರೀದಿಸಿದ್ದಾನೆ. ನಂತರ ಮನೆಯೊಂದರಲ್ಲಿ ಪೆನ್‌ಡ್ರೈವ್‌ನಲ್ಲಿದ್ದ ವಿಡಿಯೋವನ್ನು ಒಟಿಜಿ ಕೇಬಲ್ ಮೂಲಕ ಮೊಬೈಲ್‌ವೊಂದಕ್ಕೆ ವರ್ಗಾಯಿಸಿಕೊಂಡಿದ್ದಾನೆ. ಆ ಬಳಿಕ ವೈ-ಫೈ ಮೂಲಕ ಕರ್ನಾಟಕ ಹನಿಟ್ರ್ಯಾಪ್ ಎಂಬ ಯುಟ್ಯೂಬ್ ಚಾನಲ್‌ಗೆವಿಡಿಯೋ ಗಳನ್ನು ಅಪ್ಲೋಡ್ ಮಾಡಿದ್ದ. ಆ ಖಾತೆಯ ಮೂಲಕವೇ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್ ವಿಡಿಯೋವನ್ನು ಆರೋಪಿಯೇ ಅಪ್ಲೋಡ್ ಮಾಡಿದ್ದ ಎಂಬುದಕ್ಕೆ ಸಾಕ್ಷ್ಯ ಸಂಗ್ರಹಿಸಿದ್ದಾರೆ. ರಿತೇಶ್ ಪಾಂಡೆ ಮೊಬೈಲ್ ಖರೀದಿಸಿದ್ದ ಅಂಗಡಿಯ ಬಿಲ್ ಹಾಗೂ ಅಲ್ಲಿನ ಸಿಸಿ ಕ್ಯಾಮೆರಾ ದೃಶ್ಯಗಳನ್ನೂ ಪೊಲೀಸರು ಪರಿಶೀಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಡಿಯೋ ಅಪ್ಲೋಡ್ ಮಾಡುವಂತೆ ರಿತೇಶ್‌ಗೆ ಸೂಚನೆ ನೀಡಿದವರು ಯಾರು? ಪೆನ್‌ಡ್ರೈವ್‌ಅನ್ನು ಆತನಿಗೆ ಕೊಟ್ಟವರು ಯಾರು? ಈ ಕೆಲಸಕ್ಕಾಗಿ ಹಣ ನೀಡಿದವರು ಯಾರು ? ಎಂಬ ಬಗ್ಗೆ ಆತನಿಗೂ ಗೊತ್ತಿಲ್ಲ. ಈತನ ಬಗ್ಗೆ ತಿಳಿದು ಕೊಂಡವರು ನೇರವಾಗಿ ಆರೋಪಿಯನ್ನು ಸಂಪರ್ಕಿಸಿ ಡೀಲ್ ಮಾಡಿದ್ದಾರೆ. ಆದರೆ, ವಿಡಿಯೋ ಅಪ್ಲೋಡ್ ಮಾಡಲು 80 ಸಾವಿರ ರೂ. ನೀಡಲಾಗಿದೆ ಎಂಬುದಷ್ಟೇ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.













