ಮೆಲ್ಬರ್ನ್: ಆಸ್ಟ್ರೇಲಿಯಾದ ಹಿರಿಯ ಆಟಗಾರ, ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರು ಇದೀಗ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗುವ ಬಗ್ಗೆ ಮಾತನಾಡಿದ್ದಾರೆ. ಮುಂದಿನ ಆಶಸ್ ಸರಣಿಯಲ್ಲಿ ಪಾಲ್ಗೊಳ್ಳುವ ಕುರಿತು ಸ್ಟೀವ್ ಸ್ಮಿತ್ ಯಾವುದೇ ನಿರ್ಧಾರ ಮಾಡಿಲ್ಲ ಎಂದಿದ್ದಾರೆ.
ತಮ್ಮ ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆ ಪ್ರತಿ ಸರಣಿಯ ನಂತರವಷ್ಟೇ ನಿರ್ಧರಿಸುತ್ತೇನೆ ಎಂದು ಸ್ಮಿತ್ ಹೇಳಿದರು. ಇಂಗ್ಲೆಂಡ್‌ನಲ್ಲಿ ಚೊಚ್ಚಲ ಆಶಸ್ ಸರಣಿ ಗೆಲುವಿನ ಅವಕಾಶವಿದ್ದರೂ, ಮುಂದಿನ ಬೇಸಿಗೆಯಲ್ಲಿ ಆಸ್ಟ್ರೇಲಿಯಾ ತಂಡದ ಇಂಗ್ಲೆಂಡ್ ಪ್ರವಾಸದ ಭಾಗವಾಗಬೇಕೇ ಅಥವಾ ಬೇಡವೇ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು 37 ವರ್ಷದ ಸ್ಮಿತ್ ಹೇಳಿದ್ದಾರೆ.
“ನಾನು ಇಂಗ್ಲೆಂಡ್‌ನಲ್ಲಿಯೇ ಇರುತ್ತೇನೆಯೇ ಎಂಬುದು ಕೂಡ ನನಗೆ ಇನ್ನೂ ಖಚಿತವಿಲ್ಲ,” ಎಂದು ಸ್ಮಿತ್ ದಿ ಟೆಲಿಗ್ರಾಫ್ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು.
ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ, ಭಾರತ ಮತ್ತು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಸರಣಿಗಳನ್ನು ಒಳಗೊಂಡಂತೆ, ಸವಾಲಿನ ಟೆಸ್ಟ್ ಪಂದ್ಯಗಳ ಸರಣಿಗಾಗಿ ಸಿದ್ಧತೆ ನಡೆಸುತ್ತಿದೆ. 2018ರ ‘ಬಾಲ್-ಟ್ಯಾಂಪರಿಂಗ್’ ವಿವಾದದ ನಂತರ ಇದೇ ಮೊದಲ ಬಾರಿಗೆ ಅವರು ಟೆಸ್ಟ್ ಕ್ರಿಕೆಟ್ ಆಡಲು ಹರಿಣಗಳ ದೇಶಕ್ಕೆ ಮರಳಲಿದ್ದಾರೆ.
ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆ ಇನ್ನೂ ಅನಿಶ್ಚಿತತೆ ಇದ್ದರೂ, ಸ್ಮಿತ್ ಆಟದಿಂದ ಸಂಪೂರ್ಣವಾಗಿ ದೂರವಾಗುವ ಯಾವುದೇ ಉದ್ದೇಶವನ್ನು ಹೊಂದಿಲ್ಲ. “ಸದ್ಯಕ್ಕೆ, ಒಲಿಂಪಿಕ್ಸ್‌ನ ಭಾಗವಾಗಲು ಪ್ರಯತ್ನಿಸುವುದೇ ಮುಖ್ಯ ಗುರಿಯಾಗಿದೆ” ಎಂದು ಸ್ಮಿತ್ ಹೇಳಿದರು.













