ತಮಿಳು ಚಿತ್ರರಂಗದ ಜನಪ್ರಿಯ ನಟ ಧನುಷ್ ಅವರ ರಾಜಕೀಯ ಪ್ರವೇಶದ ಕುರಿತು ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಭಾನುವಾರ ತಮ್ಮ ಅಧಿಕೃತ ಅಭಿಮಾನಿ ಸಂಘದ 3,000ಕ್ಕೂ ಹೆಚ್ಚು ಮಹಿಳಾ ಪದಾಧಿಕಾರಿಗಳು ಮತ್ತು ಸ್ವಯಂಸೇವಕರನ್ನು ಭೇಟಿಯಾಗಲು ಅವರು ಸಿದ್ಧತೆ ನಡೆಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ನಟನ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ತಮಿಳುನಾಡಿನಲ್ಲಿ ಹೆಚ್ಚಾಗಿದೆ ಎಂದು ಜಾಲತಾಣ ಮಾಧ್ಯಮ ತಿಳಿಸಿದೆ.
ಚೆನ್ನೈ ಹೊರವಲಯದಲ್ಲಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಈ ಸಭೆ ನಡೆಯುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕಾಗಿ ಆವರಣದಲ್ಲಿ ಧನುಷ್ ಅವರ ಭಾವಚಿತ್ರಗಳಿರುವ ಬ್ಯಾನರ್ಗಳು ಮತ್ತು ಪೋಸ್ಟರ್ಗಳನ್ನು ಅಳವಡಿಸಲಾಗಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಧನುಷ್ ಅವರ ಅಭಿಮಾನಿ ಸಂಘದ ಹೆಸರನ್ನು ‘ಧನುಷ್ ಫ್ಯಾನ್ಸ್ ಕ್ಲಬ್’ನಿಂದ ‘ಧನುಷ್ ನರ್ಪಣಿ ಇಯಕ್ಕಂ’ ಎಂದು ಬದಲಾಯಿಸಲಾಗಿದೆ. ತಮಿಳಿನಲ್ಲಿ ಈ ಹೆಸರು ‘ಧನುಷ್ ಕಲ್ಯಾಣ ಚಳವಳಿ’ ಎಂಬ ಅರ್ಥವನ್ನು ಹೊಂದಿದೆ. ಅಕ್ಟೋಬರ್ 14ರಂದು ಕೊಯಮತ್ತೂರಿನಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ಬದಲಾವಣೆಗೆ ಅಧಿಕೃತ ಅನುಮೋದನೆ ದೊರೆತಿದೆ. ಸಂಘದ ಹೊಸ ಲಾಂಛನವನ್ನೂ ಬಿಡುಗಡೆ ಮಾಡಲಾಗಿದೆ.













