ನಟನೆಯಿಂದ ದೂರ ಸರಿದರೂ ತಲಪತಿ ವಿಜಯ್‌ಗೆ ವಿಡಿಯೋ ಕಾಟ! ಆರೋಪಿ ಬಂಧನ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಎಐ ಆಧಾರಿತ ಡೀಪ್‌ಫೇಕ್ ವಿಡಿಯೋವನ್ನು ಸೃಷ್ಟಿಸಿ, ಸಾರ್ವಜನಿಕರಿಗೆ ಆರ್ಥಿಕ ನೆರವಿನ ಆಮಿಷವೊಡ್ಡಿ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ತಮಿಳುನಾಡು ಅಪರಾಧ ವಿಭಾಗದ ಸಿಐಡಿ ಬಂಧಿಸಿದ್ದಾರೆಂದು ಎಂದು ತಿಳಿದು ಬಂದಿದೆ.

Advertisement

ರಾಜಸ್ಥಾನದ ಅಲ್ವಾ‌ರ್ ಜಿಲ್ಲೆಯ ಲಚ್ಚಂಗಢ ನಿವಾಸಿ ಶಾಯಬು ಖಾನ್ (28) ಬಂಧಿತ ಆರೋಪಿ. ಸ್ಥಳೀಯ ಪೊಲೀಸರ ಸಹಾಯದಿಂದ ಸಿಬಿ-ಸಿಐಡಿ ವಿಶೇಷ ತಂಡವು ಈತನನ್ನು ವಶಕ್ಕೆ ಪಡೆದಿದೆ. ಪ್ರಕರಣದ ಹಿನ್ನೆಲೆ ಸೈಬ‌ರ್ ಕಣ್ಣಾವಲು ನಡೆಸುತ್ತಿದ್ದ ವೇಳೆ, ತಮಿಳುನಾಡು ಮುಖ್ಯಮಂತ್ರಿಯವರ ನಕಲಿ ಮುಖ ಹಾಗೂ ಹಿಂದಿ ಧ್ವನಿಯನ್ನೊಳಗೊಂಡ ವೀಡಿಯೊಗಳು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿರುವುದು ಸೈಬರ್ ಅಪರಾಧ ವಿಭಾಗದ ಗಮನಕ್ಕೆ ಬಂದಿತ್ತು. ಈ ವಿಡಿಯೋಗಳಲ್ಲಿ ಮುಖ್ಯಮಂತ್ರಿಯೇ ನೇರವಾಗಿ ಮಾತನಾಡುವಂತೆ ಬಿಂಬಿಸಿ, ಸಾರ್ವಜನಿಕರಿಗೆ ಆರ್ಥಿಕ ಸಹಾಯ ನೀಡಲಾಗುವುದು ಎಂದು ನಂಬಿಸಿ, ನಿರ್ದಿಷ್ಟ ವಾಟ್ಸಾಪ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದರು.

Advertisement
Advertisement

ಈ ಕುರಿತು ಅಧಿಕೃತ ದೂರು ದಾಖಲಿಸಿಕೊಂಡು ಸಿಬಿ-ಸಿಐಡಿ ಸೈಬರ್ ಕ್ರೈಮ್ ಸೆಲ್‌ನಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ವಂಚನೆ ಜಾಲದಿಂದ ಮಧ್ಯಪ್ರದೇಶ ಹಾಗೂ ಇತರೆ ರಾಜ್ಯಗಳ ಕೆಲವು ನಾಗರಿಕರು ಈಗಾಗಲೇ ಮೋಸ ಹೋಗಿರುವುದು ಡಿಜಿಟಲ್ ಸಾಕ್ಷ್ಯಗಳಿಂದ ಬೆಳಕಿಗೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ನಕಲಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆರವುಗೊಳಿಸಲು ಕ್ರಮ ಕೈಗೊಂಡಿದ್ದು, ರಾಜಸ್ಥಾನ ಮತ್ತು ಮಧ್ಯಪ್ರದೇಶಕ್ಕೆ ವಿಶೇಷ ತಂಡಗಳನ್ನು ಕಳುಹಿಸಿದ್ದರು.
ಅಲ್ವಾರ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯಿಂದ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು ಮತ್ತು ಸಿಪಿಯು ವಶಪಡಿಸಿಕೊಳ್ಳಲಾಗಿದೆ. ಬಳಿಕ ಆತನನ್ನು ಪ್ರೊಡಕ್ಷನ್ ವಾರಂಟ್ ಮೂಲಕ ತಮಿಳುನಾಡಿಗೆ ಕರೆತರಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಧ್ಯಪ್ರದೇಶದ ಸಂತ್ರಸ್ತರೊಬ್ಬರ ಹೇಳಿಕೆಯು ಈ ಪ್ರಕರಣವನ್ನು ಮತ್ತಷ್ಟು ಬಲಪಡಿಸಿದೆ.

ಆರೋಪಿ ಶಾಯಬು ಖಾನ್ ಒಂಟಿಯಾಗಿ ಈ ಕೃತ್ಯ ಎಸಗಿದ್ದಾನೆಯೇ ಅಥವಾ ಇದರ ಹಿಂದೆ ದೊಡ್ಡ ಜಾಲವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜತೆಗೆ, ಪಾಕಿಸ್ತಾನ ಮೂಲದ್ದೆನ್ನಲಾದ ಕೆಲವು ಫೇಸ್‌ಬುಕ್ ಖಾತೆಗಳ ಮೂಲಕವೂ ಇಂತಹದೇ ನಕಲಿ ವಿಡಿಯೋಗಳು ಹಂಚಿಕೆಯಾಗುತ್ತಿರುವುದು ಗೊತ್ತಾಗಿದ್ದು, ವಿದೇಶಿ ಮೂಲದ ಅಪರಾಧಿಗಳ ಪತ್ತೆಗಾಗಿ ಡಿಜಿಟಲ್ ತನಿಖೆ ಚುರುಕುಗೊಳಿಸಲಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page