ಸುಳ್ಯ : ತಾಲೂಕು ಮೀಲಾದ್ ಸಮಿತಿ ಇದರ ವತಿಯಿಂದ ಸೆ.11 ರಂದು ಸುಳ್ಯ ನಗರದಲ್ಲಿ ಆಯೋಜಿಸಲಾದ ಈದ್ ಮಿಲಾದ್ ಕಾರ್ಯಕ್ರಮದ ಮೆರವಣಿಗೆಯ ಕುರಿತಾಗಿ ಬಿಜೆಪಿ ಮಂಡಲ ಕಾರ್ಯದರ್ಶಿ ಹಾಗೂ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕಂದಡ್ಕ ಬೇಜವಾಬ್ದಾರಿಯುತ ಮತ್ತು ಸತ್ಯಕ್ಕೆ ದೂರವಾದ ಹಾಗೂ ಕೋಮುಸೌಹಾರ್ದತೆ ಕದಡುವ ಹೇಳಿಕೆ ನೀಡಿದ್ದು, ಅದನ್ನು ತಾವು ತೀವ್ರವಾಗಿ ಖಂಡಿಸುವುದಾಗಿಯೂ, ಆ ಹೇಳಿಕೆಯನ್ನು ಹಿಂತೆಗೆದುಕೊಂಡು ವಿನಯ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದೂ ತಾಲೂಕು ಮಿಲಾದ್ ಸಮಿತಿ ತಿಳಿಸಿದೆ.
ಸೆ.15ರಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಿಲಾದ್ ಸಮಿತಿ ಸಂಚಾಲಕ ಕೆ.ಎಸ್.ಉಮ್ಮರ್ ಮಾತನಾಡಿ, ಶಾಂತಿ, ಸಾಮರಸ್ಯಕ್ಕೆ ಹೆಸರಾದ ಸುಳ್ಯದ ಸೌಹಾರ್ದ ವಾತಾವರಣವನ್ನು ಕಲುಷಿತಗೊಳಿಸುವ ಮತ್ತು ರಾಜಕೀಯ ಲಾಭಕ್ಕಾಗಿ ಜನರ ಮಧ್ಯೆ ಗೊಂದಲ ಸೃಷ್ಟಿಸುವ ದುರುದ್ದೇಶದಿಂದ ಈ ವಿನಯ್ ಕಂದಡ್ಕ ಹೇಳಿಕೆ ನೀಡಿದಂತೆ ಕಾಣುತ್ತಿದೆ. ಸುಳ್ಯದಲ್ಲಿ ಕಳೆದ ಹಲವಾರು ದಶಕಗಳಿಂದ ತಾಲೂಕು ಮೀಲಾದ್ ಸಮಿತಿಯೂ ಸೇರಿದಂತೆ ಎಲ್ಲಾ ಧರ್ಮೀಯರೂ ಪರಸ್ಪರ ಸಹೋದರತ್ವದಿಂದ ತಮ್ಮ ತಮ್ಮ ಹಬ್ಬ-ಹರಿದಿನಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ಈದ್ ಮಿಲಾದ್ ಜಾಥಾವನ್ನು ಆಯೋಜನಾ ಸಮಿತಿಯಾದ ತಾಲೂಕು ಮಿಲಾದ್ ಸಮಿತಿ ಸುಳ್ಯ ತಂಡವು ನಿಯಮಾನುಸಾರ, ಸ್ಥಳೀಯ ಆಡಳಿತ ಮತ್ತು ಪೋಲಿಸ್ ಇಲಾಖೆಯ ಪೂರ್ಣ ಅನುಮತಿಯೊಂದಿಗೆ, ಶಾಂತಿಯುತವಾಗಿ ನಡೆಸಿಕೊಂಡು ಬರುತ್ತಿದೆ. ಹೀಗಿದ್ದರೂ, ಜವಾಬ್ದಾರಿಯುತ ಸ್ಥಾನದಲ್ಲಿದ್ದ ವ್ಯಕ್ತಿಯೊಬ್ಬರು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮಿಲಾದ್ ಜಾಥಾದ ಕುರಿತು ಸಾರ್ವಜನಿಕವಾಗಿ ಇಂತಹ ಕೀಳುಮಟ್ಟದ ಹೇಳಿಕೆ ನೀಡುವುದು ಅವರ ಕೋಮುವಾದಿ ಮನಸ್ಥಿತಿಯನ್ನು ಅನಾವರಣ ಮಾಡಿದೆ ” ಎಂದು ಹೇಳಿದರು.
ಸಂಘಟಕರಾಗಲಿ, ಕಾರ್ಯಕ್ರಮದಲ್ಲಿ ಭಾಗವಹಿಸಿದವರಾಗಲೀ ಯಾವುದೇ ವಾಹನಗಳನ್ನು ತಡೆದು ನಿಲ್ಲಿಸಿಲ್ಲ, ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳನ್ನು ಮಾಡಿಲ್ಲ. ವಾಹನಗಳ ಸಂಚಾರವನ್ನು ಏಕಮುಖವಾಗಿ ಸಂಪೂರ್ಣ ಸಂಚಾರ ನಿಯಂತ್ರಣವನ್ನು ಸ್ಥಳೀಯ ಪೊಲೀಸರೇ ಮಾಡಿದ್ದಾರೆ.
ಸುಳ್ಯ ನಗರವು ಮಂಗಳೂರು ಮೈಸೂರು ಸೇರಿದಂತೆ ಹಲವಾರು ನಗರಗಳನ್ನು ಸಂಪರ್ಕಿಸುವ ಏಕ ಮಾತ್ರ ರಸ್ತೆಯಾಗಿದ್ದು ಯಾವುದೇ ಬೈಪಾಸುಗಳಾಗಲಿ, ಅಥವಾ ಬದಲಿ ರಸ್ತೆಗಳಾಗಲಿ ಇರುವುದಿಲ್ಲ ಸುಳ್ಯ ನಗರದ ವಿವಿಧ ಸಂಘಟನೆಗಳ ಮತ್ತು ಧರ್ಮಗಳ ಹಾಗೂ ಆಸುಪಾಸಿನ ಕೆಲವು ಗ್ರಾಮಗಳ ಮೆರವಣಿಗೆಗಳು, ಜಾಥಾಗಳು, ಪ್ರತಿಭಟನೆಗಳು, ಮುಂತಾದವುಗಳು ಈ ರಸ್ತೆಯಲ್ಲಿಯೇ ಸಾಗಿ ಹೋಗುವುದು. ಇಲ್ಲಿ ಅಧಿಕಾರ ಪಡೆದ ಜನಪ್ರತಿನಿಧಿಗಳು ಇದೆಲ್ಲ ಸಮಸ್ಯೆಗೆ ಇದುವರೆಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ.
ಸುಳ್ಯ ನಗರವು ಮಂಗಳೂರು ಮೈಸೂರು ಸೇರಿದಂತೆ ಹಲವಾರು ನಗರಗಳನ್ನು ಸಂಪರ್ಕಿಸುವ ಏಕ ಮಾತ್ರ ರಸ್ತೆಯಾಗಿದ್ದು ಯಾವುದೇ ಬೈಪಾಸುಗಳಾಗಲಿ, ಅಥವಾ ಬದಲಿ ರಸ್ತೆಗಳಾಗಲಿ ಇರುವುದಿಲ್ಲ. ಸುಳ್ಯ ನಗರದ ವಿವಿಧ ಸಂಘಟನೆಗಳ ಮತ್ತು ಧರ್ಮಗಳ ಹಾಗೂ ಆಸುಪಾಸಿನ ಕೆಲವು ಗ್ರಾಮಗಳ ಮೆರವಣಿಗೆಗಳು, ಜಾಥಾಗಳು, ಪ್ರತಿಭಟನೆಗಳು ಈ ರಸ್ತೆಯಲ್ಲಿಯೇ ಸಾಗಿ ಹೋಗುವುದು. ಇಲ್ಲಿ ಅಧಿಕಾರ ಪಡೆದ ಜನಪ್ರತಿನಿಧಿಗಳು ಇದೆಲ್ಲ ಸಮಸ್ಯೆಗೆ ಇದುವರೆಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ.
ಮೊನ್ನೆ ನಡೆದ ಈದ್ ಮಿಲಾದ್ ಜಾಥಾ ನಗರದಲ್ಲಿ ಸಾಗಿ ಬರುವಾಗ ನಗರದ ವಿವಿಧ ಕಡೆಯಲ್ಲಿ ಹಿಂದು ಧರ್ಮದ ಆಟೋ ಚಾಲಕರು ಟ್ರಾಫಿಕ್ ಕಂಟ್ರೋಲ್ ಮಾಡಿ ಜಾಥಾ ಸುಗಮವಾಗಿ ಸಾಗಲು ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೆ ನಗರದ ರಸ್ತೆಯ ಎರಡು ಬದಿ ಮುಸ್ಲಿಂ ಸಹೋದರಿಯರು ನಿಂತು ಜಾಥಾ ನೋಡುವಾಗ ಅಂಗಡಿ ಮಾಲಕರಾದ ಹಿಂದು ಸಹೋದರರು ಅವರಿಗೆ ಕುಳಿತುಕೊಳ್ಳಲು ಚಯರ್ ಕೊಟ್ಟು ಮಾನವೀಯತೆಯನ್ನು ತೋರಿಸಿದ್ದಾರೆ.
ವಿನಯ ಕಂದಡ್ಕರು ಕಳೆದ ನಗರ ಪಂಚಾಯತ್ ಆಡಳಿತ ಅವಧಿಯಲ್ಲಿ ಎರಡೂವರೆ ವರ್ಷ ಅಧ್ಯಕ್ಷರಾಗಿದ್ದರೂ ಸಮರ್ಪಕ ಆಡಳಿತವಾಗಲಿ ಅಥವಾ ಯಾವುದೇ ಒಳ್ಳೆಯ ಕಾರ್ಯ ಯೋಜನೆಗಳನ್ನಾಗಲೀ ಕೈಗೊತ್ತಿಕೊಂಡಿಲ್ಲ. ಈ ಸಂದರ್ಭ ಕಾರ್ಯರೂಪಕ್ಕೆ ಬಂದ ಬೃಹತ್ ನೀರು ಸರಬರಾಜು ಮಹಾಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಲ್ಲದೆ ಈ ಯೋಜನೆಯು ಸರಿಯಾಗಿ ಜಾರಿಯಾಗದೆ ಇವತ್ತು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮುಂದೆ ನಗರ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಸ್ವಪಕ್ಷದಿಂದ ಟಿಕೆಟ್ ವಂಚಿತರಾಗುವುದನ್ನು ಖಚಿತಪಡಿಸಿಕೊಂಡು ಹತಾಶರಾಗಿರುವ ವಿನಯ್ ಕಂದಡ್ಕರವರು ಕೆಲವು ವ್ಯಕ್ತಿಗಳನ್ನು ಮೆಚ್ಚಿಸಲು ಮತ್ತು ರಾಜಕೀಯವಾಗಿ ತನ್ನ ಸ್ಥಾನಗಟ್ಟಿಗೊಳಿಸಲು ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಉಮ್ಮರ್ ಹೇಳಿದರು. ರಾಜಕೀಯ ಪ್ರತಿಷ್ಠೆಗಾಗಿ ಬೇಜವಾಬ್ದಾರಿತನದ ಹೇಳಿಕೆಯಿಂದ ಸುಳ್ಯದ ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸಿದ ವಿನಯ್ ಕಂದಡ್ಕ ಅವರು ತಕ್ಷಣವೇ ಸಾರ್ವಜನಿಕವಾಗಿ ತಮ್ಮ ಮಾತನ್ನು ಹಿಂಪಡೆದು ಕ್ಷಮೆಯಾಚಿಸಬೇಕು. ಪೋಲಿಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಲು ಯತ್ನಿಸುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಮುನಾಫರ್ ನಾವೂರು, ಸಂಚಾಲಕ ರಶೀದ್ ಜಟ್ಟಿಪಳ್ಳ, ಕೋಶಾಧಿಕಾರಿ ಖಲಂದರ್ ಎಲಿಮಲೆ, ಕಾರ್ಯದರ್ಶಿ ಇನ್ಸಾಲ್ ಸುಣ್ಣಮೂಲೆ, ಉಪಾಧ್ಯಕ್ಷ ಸುಹೈಲ್, ಜತೆ ಕಾರ್ಯದರ್ಶಿ ಅಶ್ರಫ್ ನಾವೂರು ಉಪಸ್ಥಿತರಿದ್ದರು.













