ಸ್ಟಿಂಗ್ ಆಪರೇಷನ್‌ ವಿಡಿಯೋದಲ್ಲಿ ಕಾಣಿಸಿದ ಮಹಿಳೆ ಪುತ್ತೂರು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ! ಸಿದ್ದರಾಮಯ್ಯ ತೇಜೋವಧೆಗೆ ಕಾಂಗ್ರೆಸ್‌ ಕೂಡಾ ಶಾಮೀಲು!! ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ!!

ಮೈಸೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ‘ಸ್ಟಿಂಗ್‌ ಆಪರೇಷನ್‌’ ಪ್ರಕರಣವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಮತ್ತು ಬ್ಲ್ಯಾಕ್‌ಮೇಲ್‌ ಮಾಡುವ ದುರುದ್ದೇಶದಿಂದ ನಡೆಸಿರುವ ಸಂಚು ಎಂದು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಈ ಕೃತ್ಯದಲ್ಲಿ ಕಾಂಗ್ರೆಸ್‌ ಪಕ್ಷದವರೂ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

Advertisement

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

Advertisement
Advertisement

“ಸ್ಟಿಂಗ್ ಆಪರೇಷನ್‌ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯೊಬ್ಬರು ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು ಎಂಬ ಮಾಹಿತಿಯಿದೆ. ರಾಜಕೀಯ ಲಾಭ ಪಡೆಯಲು ಮತ್ತು ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ತರಲು ಈ ರೀತಿಯ ಕೃತ್ಯಕ್ಕೆ ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಲ್ಲದೆ, ಒಬ್ಬ ಮಾಧ್ಯಮ ಮುಖ್ಯಸ್ಥರೂ ಇದರಲ್ಲಿ ಕಾಣಿಸಿಕೊಂಡಿರುವುದು ವಿಡಿಯೊದಿಂದ ಸ್ಪಷ್ಟವಾಗುತ್ತದೆ. ಆದರೆ, ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಪಕ್ಷವನ್ನು ದೂಷಿಸಲು ಸಾಧ್ಯವಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

“ಸುಳ್ಳು ಆರೋಪಗಳಿಂದ ಸಿದ್ದರಾಮಯ್ಯ ಅವರು ತೀವ್ರ ಬೇಸರಗೊಂಡಿದ್ದಾರೆ. ಕಳೆದ 40 ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಅವರು ಎಂದಿಗೂ ಇಂತಹ ಕಳಂಕಕ್ಕೆ ಒಳಗಾಗಿರಲಿಲ್ಲ. ರಾಜಕೀಯ ಜೀವನದ ಕೊನೆಯ ಹಂತದಲ್ಲಿ ಇಂತಹ ಗಂಭೀರ ಆರೋಪಗಳು ಕೇಳಿಬಂದಾಗ ಬೇಸರವಾಗುವುದು ಸಹಜ. ಆದರೆ ಸತ್ಯ ಅವರ ಪರವಾಗಿದೆ. ತಂದೆ ಯಾವುದೇ ತಪ್ಪು ಮಾಡಿಲ್ಲ ಎಂಬುದು ನಮ್ಮ ಕುಟುಂಬದ ದೃಢ ನಂಬಿಕೆ. ತನಿಖೆಯ ಮೂಲಕ ಸತ್ಯ ಹೊರಬರಲಿದ್ದು, ಅಂತಿಮವಾಗಿ ಸತ್ಯಕ್ಕೇ ಜಯ ಸಿಗಲಿದೆ” ಎಂದು ಯತೀಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಪೊಲೀಸರು ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದ್ದಾರೆ ಎಂಬ ನಂಬಿಕೆಯಿದೆ; ಒಂದು ವೇಳೆ ತನಿಖೆ ನಿರೀಕ್ಷಿತ ಮಟ್ಟದಲ್ಲಿ ಸಾಗದಿದ್ದರೆ ಮುಂದಿನ ಕಾನೂನು ಕ್ರಮಗಳ ಕುರಿತು ಯೋಚಿಸಲಾಗುವುದು ಎಂದೂ ಅವರು ಎಚ್ಚರಿಸಿದರು ಎಂದು ತಿಳಿದು ಬಂದಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page