ಉಪ್ಪಿನಂಗಡಿ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ತನ್ನ ಸುವರ್ಣ ಮಹೋತ್ಸವದ ನೆನಪಿಗಾಗಿ, ಟಾರ್ಪಾಲು ಹೊದಿಕೆಯ ಗುಡಿಸಲಿನಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದ ಬಡ ಮಹಿಳೆ ಭಾಗಿ ಎಂಬುವರಿಗೆ 10 ಲಕ್ಷ ರೂ. ವೆಚ್ಚದಲ್ಲಿ ನೂತನ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದು ಮಹಿಳೆಗೆ ಬೆಚ್ಚಗಿನ ಆಸರೆ ಒದಗಿಸಿದೆ.
ಭಾಗಿ ಅವರಿಗೆ ನಿರ್ಮಿಸಿಕೊಟ್ಟ ‘ಶ್ರೀ ಗಣೇಶ’ ಹೆಸರಿನ ಆರ್ಸಿಸಿ ಮನೆಯನ್ನು ಗುರುವಾರ ಹಸ್ತಾಂತರಿಸಲಾಯಿತು. ಬೆಳಗ್ಗೆ ಗಣಪತಿ ಹೋಮ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಸಂಜೆ ಸರಳ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಮನೆಯನ್ನು ಹಸ್ತಾಂತರಿಸಲಾಯಿತು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ.ಸುಧಾಕರ ಶೆಟ್ಟಿ, ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಅನುರಾಧಾ ಆರ್.ಶೆಟ್ಟಿ, ಜೊತೆಗೆ ನಿರ್ಮಾಣಕ್ಕೆ ಸಹಕಾರ ನೀಡಿದವರು ಕಾರ್ಯಕ್ರಮದಲ್ಲಿ ಜೊತೆಯಾಗಿದ್ದರು.
ಆಸರೆಯಾದ ಗಣೇಶೋತ್ಸವ ಸಮಿತಿ: ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ 50 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಸಮಾಜಕ್ಕೆ ಸಹಕಾರಿಯಾಗಬೇಕೆಂಬ ಸಂಕಲ್ಪ ಕೈಗೊಳ್ಳಲಾಯಿತು. ಅದರಂತೆ ಸಂಕಷ್ಟದಲ್ಲಿರುವ ಮಹಿಳೆ ಭಾಗಿ ಅವರಿಗೆ ಮನೆಯೊಂದನ್ನು ನಿರ್ಮಿಸಿಕೊಡುವ ಮೂಲಕ ಸುವರ್ಣ ಮಹೋತ್ಸವವನ್ನು ಅರ್ಥಪೂರ್ಣವಾಗಿಸಲು ಸಮಿತಿ ತೀರ್ಮಾನಿಸಿತು.

ಸಮಿತಿಯ ಆಶಯಕ್ಕೆ ಸ್ಪಂದಿಸಿದ ಟೀಮ್ ದಕ್ಷಿಣ ಕಾಶಿ, ಟೀಮ್ ಅಘೋರಾ ಗಣೇಶೋತ್ಸವ ಸಮಿತಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮನೆಯಲ್ಲಿ ಒಂದು ಹಾಲ್, ಊಟದ ಹಾಲ್, ಒಂದು ಬೆಡ್ ರೂಂ. ಅಡುಗೆ ಕೋಣೆ ಹಾಗೂ ಮನೆಗೆ ತಾಗಿಕೊಂಡೇ ಸ್ನಾನಗೃಹ ಮತ್ತು ಶೌಚಗೃಹವಿದೆ. ಇದರೊಂದಿಗೆ ಸ್ನಾನಗೃಹಕ್ಕೆ ನೀರಿನ ಸ್ಟೀಲ್ ಹಂಡೆಯನ್ನು ಸಮಿತಿಯೇ ಅಳವಡಿಸಿದೆ. ಎಲ್ಲ ಕೋಣೆಗಳಿಗೆ ಕಿಟಕಿ ಬಾಗಿಲುಗಳ ಜೋಡಣೆಯೂ ಆಗಿದ್ದು, ವಯರಿಂಗ್, ಪ್ಲಂಬಿಂಗ್ ಕೆಲಸವೂ ಪೂರ್ಣವಾಗಿದೆ. ಮನೆಯ ಸುತ್ತ ಇಂಟರ್ಲಾಕ್ ಕೂಡಾ ಅಳವಡಿಸಿ ಸುಸಜ್ಜಿತಗೊಳಿಸಲಾಗಿದೆ.
ಉದ್ಯಮಿಗಳಾದ ಸುಜೀರ್ ಗಣಪತಿ ನಾಯಕ್, ಡಾ.ಎಂ.ಆರ್.ಶೆಣೈ, ಚಂದಪ್ಪ ಮೂಲ್ಯ, ಮೋಹನ್ ಕುಮಾರ್ ಉಜಿರೆ, ಯು.ಜಿ.ರಾಧಾ, ಹರೀಶ್ ಶೆಟ್ಟಿ ಗಾಂಧಿಪಾರ್ಕ್, ಸುನೀಲ್ ಕುಮಾರ್ ದಡ್ಡು, ವಿದ್ಯಾಧರ ಜೈನ್, ಕಂಗ್ಲೆ ವಿಶ್ವನಾಥ ಶೆಟ್ಟಿ, ಕರಾಯ ಎಂ.ನಾಯಕ್, ಶಶಿಧರ್ ನಟ್ಟಿಬೈಲ್, ವೇಣುಗೋಪಾಲ ನೋಂಡಾ, ಪ್ರಸನ್ನ ದರ್ಬೆ, ಕೆ.ರಾಧಾಕೃಷ್ಣ ನ್ಯಾಕ್, ಗುಣಕರ, ಪಟ್ಲ ಫೌಂಡೇಶನ್, ಕಾಳಿಕಾಂಬಾ ಭಜನಾ ಮಂಡಳಿ ಸಹಿತ ಹಲವಾರು ಮಂದಿ ಮನೆ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿದರು.












