ಬ್ಯೂಟಿಷಿಯನ್ ಅನುಮಾನಾಸ್ಪದ ಸಾವು ; ಪೈಪ್ ಉದ್ಯಮಿ ಮೊಬೈಲ್‌ ಸ್ವಿಚ್‌ ಆಫ್!

ಇಂದೋ‌ರ್: ಮಧ್ಯಪ್ರದೇಶದ ಇಂದೋರ್‌ನ ಪ್ರಸಿದ್ಧ ಎಲ್‌ಎಕ್ಸ್‌ ಹೋಟೆಲ್‌ನ ಕೊಠಡಿಯಲ್ಲಿ 32 ವರ್ಷದ ಬ್ಯೂಟಿಷಿಯನ್ ಸೋನಿಲಾ ಶರ್ಮಾ ಎಂಬಾಕೆ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಕೆಯೊಂದಿಗೆ ಹೋಟೆಲ್‌ಗೆ ಆಗಮಿಸಿದ್ದ ಪೈಪ್ ಉದ್ಯಮಿ ದೀಪಕ್ ಖಂಡೇಲ್ವಾಲ್ ಎಂಬಾತ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಸೋನಿಲಾ ಬುಧವಾರ ಮಧ್ಯಾಹ್ನ ಹೋಟೆಲ್‌ಗೆ ಆಗಮಿಸಿದ ಒಂದು ಗಂಟೆಯ ನಂತರ ದೀಪಕ್ ಕೊಠಡಿಗೆ ತೆರಳಿದ್ದ. ಸುಮಾರು 40 ನಿಮಿಷಗಳ ನಂತರ ಹೊರಬಂದ ಆತ, ಸೋನಿಲಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಸಿಬ್ಬಂದಿಗೆ ತಿಳಿಸಿ ಆಸ್ಪತ್ರೆಗೆ ಸೇರಿಸಿದ್ದ. ಆದರೆ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

Advertisement

ಆದರೆ ಪ್ರಾಥಮಿಕ ಪೋಸ್ಟ್ ಮಾರ್ಟಂ ವರದಿಯ ಪ್ರಕಾರ ಸಾವು ನೇಣು ಬಿಗಿದುಕೊಳ್ಳುವುದರಿಂದ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು. ಪೊಲೀಸರು ನಿಖರ ಕಾರಣಕ್ಕಾಗಿ ಶಾರ್ಟ್ ಪೋಸ್ಟ್ ಮಾರ್ಟಂ ವರದಿಗಾಗಿ ಕಾಯುತ್ತಿದ್ದಾರೆ. ಜೊತೆಗೆ ಪೊಲೀಸರು ಹೋಟೆಲ್ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಉದ್ಯಮಿ ದೀಪಕ್ ಖಂಡೇಲ್ವಾಲ್ ಪತ್ತೆಗೆ ಬಲೆ ಬೀಸಿದ್ದಾರೆ. ಮೃತದೇಹವನ್ನು ಕುಟುಂಬಸ್ಥರು ಸ್ವಗ್ರಾಮ ರಾಜಗಢಕ್ಕೆ ಕೊಂಡೊಯ್ದಿದ್ದಾರೆ.

Share this article

You cannot copy content of this page