ಪುತ್ತೂರು: ಇಲ್ಲಿನ ದರ್ಬೆಯ ಸಂತ ಫಿಲೋಮಿನಾ ಪ.ಪೂ ಕಾಲೇಜು ಹಾಗೂ ಹಿಂದಿ ಸಂಘ ಇದರ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ‘ಹಿಂದಿ ದಿವಸ – 2026’ ದಿನಾಚರಣೆಯನ್ನು ನಡೆಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸುಳ್ಯ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ರಾಮಕೃಷ್ಣ ಕೆ.ಎಸ್ ಮಾತನಾಡಿ, ಭಾಷೆಗಳು ಸಂಹವನದ ಮಾಧ್ಯಮವಾಗಿದ್ದು, ಸಮಾಜದ ಅವಿಭಾಜ್ಯ ಅಂಗಗಳಾಗಿವೆ. ಎಲ್ಲಾ ಭಾಷೆಗಳೂ ಅತೀ ಅನಿವಾರ್ಯವಾಗಿದ್ದು, ಹಲವಾರು ಅವಕಾಶಗಳಿಗೆ ದಾರಿದೀಪವಾಗಿವೆ.
ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳು ಒಂದೇ ರಥದ ಎರಡು ಚಕ್ರಗಳಂತಿದ್ದು, ಈ ಭಾಷೆಗಳನ್ನು ಕಲಿಯುವುದರಿಂದ ಭಾಷೆಗಳ ಜೊತೆಗೆ ನಮ್ಮ ಬೆಳವಣಿಗೆ ಕೂಡ ಸಾಧ್ಯವಿದೆ. ಬಾಷಾ ಜ್ಞಾನವು ಮಾನವನ ಚಿಂತನ ಶಕ್ತಿಯನ್ನು ಹೆಚ್ಚಿಸುತ್ತದೆ. ವಿವಿಧ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ನಾವು ಕಲಿಯುವ ಪ್ರತಿಯೊಂದು ಭಾಷೆಯೂ ನಮಗೆ ಹೊಸ ಸಂಸ್ಕೃತಿ ಮತ್ತು ಹೊಸ ಸಮಾಜವನ್ನು ಪರಿಚಯಿಸುತ್ತದೆ. ಇದರ ಜೊತೆಗೆ ನಮ್ಮ ಜ್ಞಾನವೂ ವೃದ್ಧಿಯಾಗುತ್ತದೆ. ಭಾರತೀಯ ಭಾಷೆಗಳು ವ್ಯಾಕರಣ ಪೂರ್ವಕವಾಗಿ ಅತ್ಯಂತ ಶ್ರೀಮಂತವಾಗಿದ್ದು, ಹೊಸ ಹೊಸ ಭಾಷೆಗಳು ಜೀವನದ ವಿವಿಧ ಮಜಲುಗಳಲ್ಲಿ ಉಪಯೋಗಕ್ಕೆ ಬರುತ್ತವೆ ಎಂದು ತಿಳಿಸಿದರು.
ಹಿಂದಿ ದಿನಾಚರಣೆಯ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಹಿಂದಿ ಸಂಘದ ನಿರ್ದೇಶಕರಾದ ಡಾ. ಬಿ. ಲತಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ/ ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.












