ಪುತ್ತೂರು: ಆ.31 ರಂದು ನಡೆದ ‘ಪುತ್ತೂರು ಚಲೋ’ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಪುತ್ತೂರಿನ ದರ್ಬೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ವಿಶ್ವ ಹಿಂದೂ ಪರಿಷದ್, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯವರು ಆ.31ರಂದು ‘ಪುತ್ತೂರು ಚಲೋ’ ಕಾರ್ಯಕ್ರಮ ಆಯೋಜಿಸಿದ್ದರು.
ದರ್ಬೆಯಿಂದ ವೆಂಕಟರಮಣ ದೇವಸ್ಥಾನದ ಕಡೆಗೆ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಕೆಲವರು ಸ್ಥಳೀಯ ಮುಸ್ಲಿಂ ಸಮುದಾಯವನ್ನು ಪಾಕಿಸ್ತಾನ ಹಾಗೂ ಬಾಂಗ್ಲಾದೇಶಕ್ಕೆ ಹೋಲಿಸುವ ರೀತಿಯ ಘೋಷಣೆಗಳನ್ನು ಕೂಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸಿದವರು ಎರಡು ಅಥವಾ ಹೆಚ್ಚು ಧರ್ಮಗಳ ನಡುವೆ ವೈಮನಸ್ಸು ಹಾಗೂ ದ್ವೇಷ ಉಂಟುಮಾಡುವ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಘೋಷಣೆ ಕೂಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ದೂರು ಸ್ವೀಕರಿಸಿದ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಘೋಷಣೆ ಕೂಗಿದವರಲ್ಲಿ ಬೆಳ್ತಂಗಡಿ ತಾಲೂಕಿನ – ಕಲ್ಮಂಜ ಗ್ರಾಮದ ಬನದಬೈಲು ನಿವಾಸಿ ನಾಗೇಶ್ ಶ್ರೀನಿವಾಸ ಗೌಡ ಹಾಗೂ ಇತರರು ಸೇರಿರುವುದು ತಿಳಿದುಬಂದಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












