ಉಡುಪಿ ಭಾಸ್ಕರ್‌ ಶೆಟ್ಟಿ ಕೊಲೆ ಆರೋಪಿಗಳಿಗೆ ಹಲ್ಲೆ ಪ್ರಕರಣ ; ನ್ಯಾಯಾಲಯದಿಂದ ದೋಷಿಗಳೆಂದು ತೀರ್ಪು

ದಕ್ಷಿಣ ಕನ್ನಡ: ಇಲ್ಲಿನ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರು ವಿಚಾರಣಾ ಖೈದಿಗಳ ಮೇಲೆ ಹಲ್ಲೆ ನಡೆಸಿ, ಕೊಲೆ ಯತ್ನ ಹಾಗೂ ಜೈಲು ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದ 2017ರ ಪ್ರಕರಣದಲ್ಲಿ 11 ಮಂದಿ ಆರೋಪಿಗಳನ್ನು ಮಂಗಳೂರಿನ ತ್ವರಿತಗತಿ ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ಸೆ.16ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಬರ್ಕೆ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.130/2017ರಂತೆ ಪ್ರಕರಣ ದಾಖಲಾಗಿತ್ತು. 2017ರ ಸೆ.11ರಂದು ಮಧ್ಯಾಹ್ನದ ಸಮಯಕ್ಕೆ ಕಾರಾಗೃಹದ ಹೊಸ ಕಟ್ಟಡದ ‘ಬಿ’ ಬ್ಲಾಕ್‌ನ ವರಾಂಡದಲ್ಲಿ ಈ ಘಟನೆ ನಡೆದಿತ್ತು. ತಮ್ಮ ಪ್ರಕರಣದ ವಿಚಾರಣೆಯ ದಿನಾಂಕ ತಿಳಿಯಲು ಅಧೀಕ್ಷಕರ ಕಛೇರಿಗೆ ತೆರಳುತ್ತಿದ್ದ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಅವರೊಂದಿಗೆ ಆರೋಪಿಗಳು ಘರ್ಷಣೆ ನಡೆಸಿ ಹಲ್ಲೆ ನಡೆಸಿದ್ದರು ಎಂದು ಚಾರ್ಜ್‌ ಶೀಟ್‌ನಲ್ಲಿ ಆರೋಪಿಸಲಾಗಿದೆ.

Advertisement

ನವನೀತ್ ಶೆಟ್ಟಿಗೆ ಪೈಪ್‌ನಿಂದ ತಲೆ ಮತ್ತು ಬೆನ್ನಿಗೆ ಹೊಡೆದು, ವರಾಂಡದಿಂದ ಕೆಳಗಿನ ಅಂಗಳಕ್ಕೆ ಎಳೆದು ಹಾಕಲಾಗಿತ್ತು. ಬಳಿಕ ಸ್ಟೀಲ್ ಡ್ರಂನಿಂದ ತಲೆಗೆ ಹೊಡೆದಿದ್ದು, ಕೇರಂ ಬೋರ್ಡ್‌ ನಿಂದ ತಲೆಗೆ ಹೊಡೆಯಲು ಯತ್ನಿಸಿ ಕೊಲೆ ಪ್ರಯತ್ನ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಸಂದರ್ಭ ಜೈಲು ಸಿಬ್ಬಂದಿ ಮಧ್ಯಪ್ರವೇಶಿಸಿ ಹಲ್ಲೆ ತಡೆದಿದ್ದರು. ಜೊತೆಗೆ, ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣವನ್ನು ಒಪ್ಪಿಕೊಳ್ಳುವಂತೆ ಬೆದರಿಸಿ, ₹5 ಲಕ್ಷ ನೀಡುವಂತೆ ಒತ್ತಾಯಿಸಲಾಗಿತ್ತು ಎಂದು ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದಲ್ಲಿ 11 ಮಂದಿ ದೋಷಿಗಳಾಗಿದ್ದು, ಈ ಪೈಕಿ ಮೂವರು ಇತರ ಪ್ರಕರಣಗಳಲ್ಲಿ ಈಗಾಗಲೇ ಜೈಲಿನಲ್ಲಿದ್ದಾರೆ. ಉಳಿದ 10 ಮಂದಿಯನ್ನು ನ್ಯಾಯಾಲಯದ ಆದೇಶದಂತೆ ಸೆ.11ರಂದು ವಶಕ್ಕೆ ಪಡೆಯಲಾಗಿದೆ. ಓರ್ವ ದೋಷಿ ನ್ಯಾಯಾಲಯಕ್ಕೆ ಗೈರಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನವನೀತ್ ಶೆಟ್ಟಿ ಮತ್ತು ನಿರಂಜನ್ ಭಟ್ ಅವರು ಉಡುಪಿಯ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾಗಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Share this article

You cannot copy content of this page