ಶೀಘ್ರದಲ್ಲಿ ಗ್ರಾ.ಪಂ ಚುನಾವಣೆ ; ಮತ್ತೆ ಗರಿಗೆದರಲಿದೆ ಗ್ರಾಮೀಣ ರಾಜಕೀಯ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತ್ ಚುನಾವಣೆಗೆ ಕಾಯುತ್ತಿರುವ ಗ್ರಾಮೀಣ ಜನಪ್ರತಿನಿಧಿಗಳು ಹಾಗೂ ಮತದಾರರಿಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ರಾಜ್ಯದಲ್ಲಿರುವ 5,864 ಗ್ರಾಮ ಪಂಚಾಯಿತಿಗಳ ವಾರ್ಡ್ ಮರುವಿಂಗಡಣೆ ಹಾಗೂ ಸದಸ್ಯ ಸ್ಥಾನಗಳ ಮೀಸಲಾತಿ ನಿಗದಿ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣಗೊಂಡಿದೆ ಎಂದು ರಾಜ್ಯ ಸರ್ಕಾರ ಶುಕ್ರವಾರ ಹೈಕೋರ್ಟ್‌ಗೆ ಅಧಿಕೃತವಾಗಿ ತಿಳಿಸಿದೆ.

ಎಲ್ಲಾ ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಪ್ರಕ್ರಿಯೆ ಮುಗಿಸಿರುವುದನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು ನ್ಯಾಯಪೀಠಕ್ಕೆ ಪ್ರಮಾಣಪತ್ರದ ಮೂಲಕ ಸಲ್ಲಿಸಿದರು. ಈ ಮೂಲಕ ಚುನಾವಣೆ ನಡೆಸಲು ಸರ್ಕಾರದ ಕಡೆಯಿಂದ ಆಗಬೇಕಿದ್ದ ಪ್ರಮುಖ ಪ್ರಕ್ರಿಯೆಗಳು ಮುಕ್ತಾಯಗೊಂಡಂತಾಗಿದ್ದು, ಇನ್ನು ಮುಂದಿನ ದಿನಾಂಕ ಘೋಷಣೆ ಮತ್ತು ಚುನಾವಣೆ ನಿರ್ವಹಣೆಯ ಹೊಣೆ ರಾಜ್ಯ ಚುನಾವಣಾ ಆಯೋಗದ ಅಂಗಳದಲ್ಲಿದೆ. ಹೈಕೋರ್ಟ್‌ ಪೀಠದ ಪ್ರಮುಖ ವೀಕ್ಷಣೆ ಅವಧಿ ಮುಗಿದ ಗ್ರಾಪಂಗಳಿಗೆ ಚುನಾವಣೆ ನಡೆಸಲು ಮೀಸಲಾತಿ ಪ್ರಕಟಿಸುವಂತೆ ಕೋರಿ ಸ್ವತಃ ಚುನಾವಣಾ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಟಿ.ಪಿ ವಿವೇಕಾನಂದ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
56 ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿಯು 2027ರಲ್ಲಿ ಮುಕ್ತಾಯಗೊಳ್ಳಲಿದ್ದು, ಅವುಗಳನ್ನು ಪ್ರಸ್ತುತ ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ.

Advertisement

ಇದೇ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಕರಡು ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತಿದ್ದು, ದಾಖಲೆ ಹಾಜರುಪಡಿಸಲು ಸರ್ಕಾರ ಸಮಯ ಕೋರಿತು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠವು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಿದೆ.

ಸರ್ಕಾರದ ಈ ಅಫಿಡವಿಟ್‌ನಿಂದಾಗಿ ರಾಜ್ಯದಲ್ಲಿ ಮುಂದಿನ ಕೆಲವು ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಗ್ರಾಮೀಣ ರಾಜಕೀಯ ಚಟುವಟಿಕೆಗಳು ಗರಿಗೆದರುವುದು ಬಹುತೇಕ ಖಚಿತವಾಗಿದೆ.

Share this article

You cannot copy content of this page